ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಪುನರುಜ್ಜೀವನದೊಂದಿಗೆ ದಿಗ್ವಿಜಯಕ್ಕೆ ಹೊರಟ ಪುರಾತನ ಗೋಳಿಗರಡಿ ಮೇಳ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ನವ೦ಬರ್ 22 , 2013

ಗೋಳಿ ಗರಡಿ ಎಂದಾಗ ಯಕ್ಷಗಾನ ಪ್ರೀಯರಿಗೆ ತಟ್ಟನೆ ನೆನಪಿಗೆ ಬರುವುದು ಅವಿಭಜಿತ ದ. ಕ. ಜಿಲ್ಲೆಯ ಸುಮಾರು 210 ಗರಡಿಗಳಲ್ಲಿ ಯಕ್ಷಗಾನ ಮೇಳ ಹೊಂದಿದ ಏಕಮೇವ ಗರಡಿ ಉಡುಪಿ ಜಿಲ್ಲೆಯ ಸಾಸ್ತಾನದ ಗೋಳಿಗರಡಿ. ಸುಮಾರು 150ಕ್ಕೂ ಅಧಿಕ ವರ್ಷದ ಇತಿಹಾಸವಿರುವ ಕ್ಷೇತ್ರದ ಅದಿದೈವ ಪಂಜುರ್ಲಿ ದೈವದ ಹೆಸರಿನ ``ಶ್ರೀ ಪಂಜುರ್ಲಿ ಕ್ರಪಾ ಪೋಷಿತ ಯಕ್ಷಗಾನ ಮಂಡಳಿ``ಗೆ ತನ್ನದೇ ಆದ ಇತಿಹಾಸವಿದೆ. ಯಕ್ಷಗಾನ ಕಲೆಯನ್ನು ಸೇವೆಯಾಗಿ, ಬಯಲಾಟವಾಗಿ ಪ್ರದರ್ಶಿಸುತ್ತಾ ಬಂದ ಮೇಳಗಳಲ್ಲಿ ಗರಡಿಯೊಂದರ ಆಶ್ರಯದಲ್ಲಿ ನೆಡೆಸಲ್ಪಡುವ ಏಕೈಕ ಮೇಳ ಇದಾಗಿದೆ. ಒಂದುವರೆ ಶತಮಾನಗಳ ಇತಿಹಾಸವಿರುವ ಈ ಮೇಳದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಧ್ರುವತಾರೆಯಾಗಿ ಮೆರೆದ ಘಟಾನುಘಟಿ ಕಲಾವಿದರು ಗೆಜ್ಜೆ ಕಟ್ಟಿ ಕುಣಿದಿದ್ದಾರೆ. ತಾಳ ಹಿಡಿದು ಭಾಗವತರಾಗಿದ್ದಾರೆ. ನಗರ ಜಗನ್ನಾಥ ಶೆಟ್ಟಿ. ಬೂದ ಭಾಗವತರು, ಐರೋಡಿ ಗೋವಿಂದಪ್ಪ, ಬೇಗಾರ್ ಪದ್ಮನಾಭ, ಎಂ. ಕೆ. ರಮೇಶಾಚಾರ್ಯ, ಹೆಮ್ಮಾಡಿ ರಾಮ ಚಂದನ್, ನಾರಾಯಣ ಶಬರಾಯ, ಹಾರಾಡಿ ಅಣ್ಣಪ್ಪ ಗಾಣಿಗ, ಸುರೇಂದ್ರ ಪಣಿಯೂರ್ ಮುಂತಾದವರು ಈ ಮೇಳದಲ್ಲಿ ಗೆಜ್ಜೆ ಕಟ್ಟಿ, ತಾಳ ಹಿಡಿದು ಪ್ರಸಿದ್ದಿಗೆ ಬಂದಿದ್ದರು. ಯುವ ಕಲಾವಿದರಾದ ಆನಂದ ಅಂಕೋಲ, ಕುಮಟ ಗಣಪತಿ ನಾಯಕ್, ನಾಗರಾಜ ಪಂಚಲಿಂಗ, ಅಲ್ಲದೆ ಜಲವಳ್ಳಿ ವೆಂಕಟೇಶ ರಾವ್, ಮುಂತಾದವರು ತಿರುಗಾಟ ಮಾಡಿದ ಮೇಳವಿದು. ಹೀಗೆ ಯಕ್ಷಗಾನ ಕ್ಷೇತ್ರಕ್ಕೆ ಘಟಾನುಘಟಿ ಕಲಾವಿದರನ್ನು ಪರಿಚಯಿಸಿದ ಕೀರ್ತಿಯೂ ಈ ಮೇಳಕ್ಕಿದೆ. ತುಳುನಾಡಿನ ಅವಳಿ ವೀರರು, ಐತಿಹಾಸಿಕ ಪುರುಷರಾದ ಕೋಟಿ-ಚನ್ನಯ್ಯರ ಚರಿತ್ರೆಯನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವಲ್ಲಿ ಗೋಳಿಗರಡಿ ಮೇಳದ ಕೊಡುಗೆ ಅನನ್ಯ. ಕೋಟಿ-ಚನ್ನಯ್ಯ ಯಕ್ಷಗಾನಕ್ಕೆ ರೂಪುಗೊಂಡು ಆ ಕಾಲದ ಐತಿಹಾಸಿಕ ಹಾಗೂ ಸಾಮಾಜಿಕ ಕಥಾನಕವಾಗಿ ಮೂಡಿಬಂದಾಗ ಅದನ್ನು ಸಮರ್ಥವಾಗಿ ಶ್ರದ್ದೆಯಿಂದ ಪ್ರದರ್ಶಿಸಿದ ಮೇಳವಿದು. ಕೋಟಿ-ಚನ್ನಯ್ಯ ಪ್ರಸಂಗವೆಂದಾಗ ಗೋಳಿಗರಡಿ ಮೇಳವೆಂಬಷ್ಟು ಜನಪ್ರೀತಿ ಗಳಿಸಿದ ಕಾಲವೊಂದಿತ್ತು.

ತುಳುನಾಡಿನ ಅವಳಿ ವೀರರು, ಐತಿಹಾಸಿಕ ಪುರುಷರಾದ ಕೋಟಿ-ಚನ್ನಯ್ಯ
ಕಾಲಚಕ್ರ ಬದಲಾದಂತೆ ಮೇಳಗಳಲ್ಲೂ ಬದಲಾವಣೆಗಳಾಯಿತು. ಬದಲಾವಣೆಯ ಬಿರುಗಾಳಿಗೆ ಯಕ್ಷಗಾನ ಮೇಳಗಳು ಸಹ ಸಿಕ್ಕಿ ಜರ್ಜರಿತವಾದವು. ಕೆಲವು ಪ್ರಸಿದ್ದ ಮೇಳಗಳು ನಿಂತು ಹೋದದ್ದು ಈಗ ಇತಿಹಾಸ. ಅತಿರಥ, ಮಹಾರಥರ ಹಿಮ್ಮೇಳ. ಎರಡು ಮೇಳಕ್ಕಾಗುವಷ್ಟು ಕಲಾವಿದರು, ನಾಲ್ಕು ಮಂದಿ ಎರಡನೇ ವೇಷದಾರಿಗಳಿಂದ ಪ್ರಸಿದ್ದಿ ಪಡೆದ ಡೇರೆವೊಂದು ಮೇಳ ಕೇವಲ ನಾಲ್ಕೈದು ವರ್ಷದಲ್ಲೇ ನಿಂತು ಹೋಗಿದ್ದನ್ನು ಯಕ್ಷಗಾನಾಭಿಮಾನಿಗಳು ನೋವಿನಿಂದ ನೆನಪಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿಯೂ ತನ್ನ ಅಸ್ಥಿತ್ವವನ್ನು ಕಾಪಾಡಿಕೊಂಡು ಬಂದ ಗೋಳಿಗರಡಿ ಮೇಳ ಕ್ಷೀಣಿಸಿದ್ದಂತು ಸತ್ಯ. ಇಲ್ಲಿನ ಪ್ರಸಿದ್ದ ಕಲಾವಿದರು ಬೇರೆ ಮೇಳಕ್ಕೆ ವಲಸೆ ಹೋಗಿದ್ದು, ವ್ಯವಸ್ಥಾಪಕರಲ್ಲಿ ಆಸಕ್ತಿ ಕಡಿಮೆಯಾಗಿದ್ದು, ಬಯಲಾಟ ಮೇಳಗಳ ಸಂಖ್ಯೆ ಹೆಚ್ಚಾಗಿದ್ದು. ದಕ್ಷ ಆಡಳಿತದ ಕೊರತೆ ಮುಂತಾದ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಮೇಳ ತೀರಾ ಹಿನ್ನಡೆಗೆ ಒಳಗಾಗಿತ್ತು. ಒಂದು ವರ್ಷದ ಅವಧಿಗೆ ಡೇರೆ ಮೇಳವಾಗಿಯೂ ಅದು ತಿರುಗಾಟ ನೆಡೆಸಿದೆ. ಈ ಮೇಳವನ್ನು ಯಜಮಾನರು ಮಾತ್ರವಲ್ಲದೆ ಕಲಾವಿದರು ನಡೆಸಿದ ಉದಾಹರಣೆ ಸಹ ಇದೆ. ನಂತರ ಮೇಳ ಪುನಹ ಹರಕೆಯನ್ನೇ ಪ್ರಾದಾನ್ಯತೆಯಾಗಿಟ್ಟುಕೊಂಡು ಪುನಹ ತಿರುಗಾಟಕ್ಕೆ ಹೊರಟಾಗ ಮೇಳದ ಉಸ್ತುವಾರಿಯಲ್ಲಿನ ಕೆಲವು ದೋಷಗಳು ಮೇಳವನ್ನು ತೀರಾ ಹಿನ್ನಡೆಗೆ ಕೊಂಡ್ಯೂಯ್ದವು. ಗೋಳಿಗರಡಿ ಮೇಳ ನಿಂತು ಹೋಗುತ್ತದೆ ಎಂಬ ಸುದ್ದಿ ಕಲಾಬಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಮೇಳ ನಿಲ್ಲಬಾರದು, ಪರಂಪರೆ ಉಳಿಯಬೇಕು ಎಂಬ ಸಲಹೆಗಳು ಆಸ್ತಿಕ ಬಂಧುಗಳಿಂದ ಕೇಳಿಬರತೊಡಗಿತು.

ಉಡುಪಿ ಜಿಲ್ಲೆಯ ಪವಾಡ ಕ್ಷೇತ್ರಗಳಲ್ಲಿ ಒಂದಾಗಿ ಬಿಲ್ಲವ ಸಮಾಜದ ಬ್ರಹ್ಮ ಬೈದರ್ಕಳ ಗರಡಿ, ಅಲ್ಲದೆ ಜಿಲ್ಲೆಯ ಎಲ್ಲ ಸಮಾಜದವರ ಮನೆ ಮನೆಗಳಲ್ಲಿ ನೆಲೆನಿಂತ ಪಂಜುರ್ಲಿ ದೈವದ ಕಾರಣಿಕ ಸ್ಥಳವಾದ ಇಲ್ಲಿಗೆ ಸಮಸ್ತ ಸಮಾಜದವರು ಇಲ್ಲಿಗೆ ದರ್ಶನಕ್ಕೆ ಬರುತ್ತಾರೆ. ಇಂತಹ ಕ್ಷೇತ್ರದ ಮೇಳ ನಿಲ್ಲಬಾರದು ಎಂಬ ಕಾರಣಕ್ಕಾಗಿ ಮೇಳವನ್ನು ತಳಮಟ್ಟದಿಂದ ಮೇಲೆತ್ತಲು ಗರಡಿಯ ಮುಖ್ಯಸ್ತರು ಮುಂದಾಗಿದ್ದಾರೆ. ಎಲ್ಲವು ಹೊಸತು ಸಮಗ್ರ ಬದಲಾವಣೆಯೆಂಬ ದ್ಯೇಯ ವಾಕ್ಯವನ್ನು ಮುಂದಿರಿಸಿ ಕೊಂಡು ಸಾಂಪ್ರದಾಯಿಕ ಗೋಳಿಗರಡಿ ಮೇಳವನ್ನು ಪುನರುಜ್ಜೀವನಗೊಳಿಸಬೇಕೆಂದು ಕಟಿಬದ್ದರಾದವರು ಸಾಮಾಜಿಕ ಕಳಕಳಿಯ ಜಿ. ವಿಠಲ ಪೂಜಾರಿಯವರು. ಹಿಂದೆ ಗರಡಿಯ ಪಾತ್ರಿಯಾಗಿದ್ದ ಚಂದು ಪೂಜಾರಿಯವರ ಸಮರ್ಥ ನೇತ್ರತ್ವದಲ್ಲಿ ಮೇಳ ಮೇಲ್ಮಟ್ಟದಲ್ಲಿತ್ತು. ಆ ಖ್ಯಾತಿ ಹಾಗು ಅವರ ಅಪೇಕ್ಷೆಯನ್ನು ಸಾಫ಼್ಹಲ್ಯಗೊಳಿಸಬೇಕೆಂಬ ನಿಟ್ಟಿನಲ್ಲಿ ಮೇಳದ ಪುನರುತ್ಥಾನಕ್ಕೆ ಮುಂದಾಗಿದ್ದಾರೆ. ಮೇಳವು ಈಗಾಗಲೇ ರಿಜಿಸ್ಟ್ರೇಷನ್ ಕೂಡ ಆಗಿದ್ದು ಅತೀ ಕಡಿಮೆ ವೀಳ್ಯದಲ್ಲಿ ಹರಕೆಯಾಟ ಕಾಲಮಿತಿಯ ಯಕ್ಷಗಾನ ಪ್ರದರ್ಶನ ನೀಡಲಾಗುವುದು. ಕಲಾಪ್ರೇಮಿಗಳು, ಭಕ್ತಾದಿಗಳು, ಯಕ್ಷಗಾನ ಪ್ರದರ್ಶನ ನೀಡಿ ಕಲೆಯನ್ನು ಪ್ರೋತ್ಸಾಹಿಸುವುದರೊಂದಿಗೆ ದೇವರ ಕೃಪೆಗೆ ಪಾತ್ರರಾಗಬೇಕೆಂಬುದು ಮೇಳದ ಅಧ್ಯಕ್ಷರಾದ ಜಿ. ವಿಠಲ ಪೂಜಾರಿಯವರ ಆಶಯ.

ಮುಖ್ಯವಾಗಿ ಅಳಿಯಕಟ್ಟು ಸಮಾಜದವರ ಆರಾದ್ಯ ದೈವ ಶ್ರೀ ಪಂಜುರ್ಲಿ ಸಹಿತ ಪರಿವಾರವಿರುವ ಈ ಕ್ಷೇತ್ರ ಭಕ್ತಕೋಟಿಯ ಕಷ್ಟ ನಷ್ಟ ದೂರೀಕರಿಸಿ ಸುಖ ಸಂಪತ್ತನ್ನು ಅನುಗ್ರಹಿಸುವ ಕ್ಷೇತ್ರವೆಂಬುದು ಅನಾದಿಯಿಂದ ನಂಬಿಕೊಂಡುಬಂದ ಸತ್ಯ. ಮೇಳದ ಉಸ್ತುವಾರಿಗೆ ಸಾರ್ವಜನಿಕ ಸಮಿತಿ ರಚಿತವಾಗಿದ್ದು ಮೇಳವನ್ನು ಕ್ಷೇತ್ರದ ವತಿಯಿಂದ ನಡೆಸುವ ಸಕಲ ಸಿದ್ದತೆ ನಡೆಸಲಾಗಿದೆ. ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಮೇಳವನ್ನು ಪುನರಪಿ ಕಟ್ಟಲಾಗಿದೆ. ಹೊಸ ಜನರೇಟರ್, ರಂಗಸಜ್ಜಿಕೆ, ಚೌಕಿ, ವೇಷಭೂಷಣ, ಅಲ್ಲದೆ ಹೊಸದಾಗಿ ಮೇಳಕ್ಕೆ ಸಂಚಾರಕ್ಕೆ ಬಸ್, ವ್ಯವಸ್ಥೆ ಮಾಡಲಾಗಿದೆ. ಪ್ರಸಿದ್ದ ಹೊಸ ಕಲಾವಿದರ ಸೇರ್ಪಡೆಯೊಂದಿಗೆ ಮೇಳ ನವಂಬರ್ 20ರಂದು ತಿರುಗಾಟಕ್ಕೆ ಹೊರಟಿರುವುದು ಹೊಸ ಭರವಸೆ ಮೂಡಿಸಿದೆ. ಮೇಳದ ಪ್ರಥಮ ದೇವರ ಸೇವೆ ನ. 20ರಂದು ಸಾಸ್ತಾನ ಚಂದುಪೂಜಾರಿ ಸ್ಮಾರಕ ಪ್ರಶಸ್ತಿಯನ್ನು ಹಿರಿಯ ಕಲಾವಿದ ಅರಲಗೋಡು ಮಾದವ ನಾಯ್ಕರಿಗೆ ಪ್ರದಾನ ಮಾಡಿದರು. ಮೇಳದ ಉಸ್ತುವಾರಿಗೆ ಅದ್ಯಕ್ಷರಾಗಿ ಜಿ. ವಿಠಲ್ ಪೂಜಾರಿ, ಉಪಾದ್ಯಕ್ಷರಾಗಿ ರಾಜ್ಯ ಪ್ರಶಸ್ತಿ ಪುರಸ್ಕ್ರತ ಹಿರಿಯಕಲಾವಿದ ಐರೋಡಿ ಗೋವಿಂದಪ್ಪ, ಕಾರ್ಯದರ್ಶಿಯಾಗಿ ಗಣೇಶ ಪೂಜಾರಿ, ಹಾಗೂ ಜೊತೆ ಕಾರ್ಯದರ್ಶಿಯಾಗಿ ಶಂಕರ ಕುಲಾಲ್, ಕೋಶಾದಿಕಾರಿಯಾಗಿ ಗಣಪಯ್ಯ ಆಚಾರ್ಯ ಮತ್ತು ಗೋಪಾಲ ಮಡಿವಾಳ, ಸಂಘಟನಾ ಕಾರ್ಯದರ್ಶಿಯಾಗಿ ಗಂಗಾದರ ಪೂಜಾರಿ, ಗೌರವಾದ್ಯಕ್ಷರಾಗಿಖ್ಯಾತ ಲೆಖ್ಖ ಪರಿಶೋದಕ ದೇವಾನಂದ್, ಗೌ. ಸಲಹೆಗಾರರಾಗಿ ಶಂಕರ ಪೂಜಾರಿಯವರ ಸಮಿತಿಯೊಂದಿಗೆ ಆಡಳಿತ ಮಂಡಳಿಯ ಸಹಕಾರದಲ್ಲಿ ಮೇಳ ತಿರುಗಾಟಕ್ಕೆ ಸಜ್ಜಾಗಿದೆ. ಇದೇ ನವಂಬರ್ 20ರಂದು ಪ್ರಥಮ ದೇವರ ಸೇವೆ ಪೂರೈಸಿ ಮೇಳ ದಿಗ್ವಿಜಯಕ್ಕೆ ಹೊರಡಿದೆ.

****************

ಕೆಲವು ಛಾಯಾಚಿತ್ರಗಳು





ಹಿರಿಯ ಕಲಾವಿದ ಅರಲಗೋಡು ಮಾದವ ನಾಯ್ಕರಿಗೆ ಚಂದುಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ



2013-14ನೇ ವರ್ಷದ ತಿರುಗಾಟದ ಮೇಳದ ಕಲಾವಿದರು






Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ